ಮೊನೆ, ಕ್ಲಾಡ್	 1840 - 1926. ಫ್ರಾನ್ಸಿನ ಚಿತ್ರಕಾರ. ನಿಸರ್ಗದ ದೃಶ್ಯಗಳನ್ನು ರಮಣಿಯವಾಗಿ ಈತ ಚಿತ್ರಿಸುತ್ತಿದ್ದ. ಲೆ ಹಾವ್ರೆಯ ಕಿರಾಣಿ ಅಂಗಡಿಕಾರನ ಮಗ. ಆ ಊರಿನಲ್ಲಿ ಈತ ಚಿತ್ರಕಾರ ಬೋದ್ಯನ್‍ನೊಂದಿಗೆ (1825 - 98) ಅಭ್ಯಾಸ ಮಾಡಿದ. 1862ರಲ್ಲಿ ಈತ ಪ್ಯಾರಿಸ್ಸಿಗೆ ಹೋದ; ಅಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಈತನಿಗೆ ಸೆಜಾಜನ್, ರೆನೋರ್ ಮತ್ತು ಸಿಸ್‍ಲೆ ಎಂಬ ಚಿತ್ರಕಾರರ ಪರಿಚಯವಾಯಿತು. 1865ರಲ್ಲಿ ಈತನ ಎರಡು ಕಲಾಕೃತಿಗಳು ಪ್ಯಾರಿಸ್ಸಿನಲ್ಲಿ ಪ್ರದರ್ಶನಗೊಂಡವು. ಫ್ರಾಂಕೋ - ಪ್ರಷ್ಯನ್ ಯುದ್ಧದಿಂದಾಗಿ ಈತ ಸ್ವದೇಶ ಬಿಟ್ಟು ವಿದೇಶಗಳಲ್ಲಿ (1830 - 1903) ಪ್ರವಾಸಮಾಡಬೇಕಾಯಿತು. ಆ ಸಂದರ್ಭದಲ್ಲೇ ಈತನಿಗೆ ಪಿಸಾರೊನ (1839 - 1903) ಪರಿಚಯವಾಯಿತು. ಬ್ರೆತ್ ಮೊರಿಸೊತ್ (1841 - 95) ಹಗೂ ಸಿಸ್‍ಲೆ (1839 - 99) ಅವರೊಡಗೂಡಿ ಪ್ಯಾರಿಸ್ಸಿಗೆ ಹಿಂದಿರುಗಿದ ಮೇಲೆ 1875ರಲ್ಲಿ ಚಿತ್ರಪ್ರದರ್ಶವೊಂದನ್ನು ಏರ್ಪಡಿಸಿದ. ಇವನ ಚಿತ್ರಗಳಲ್ಲೊಂದರ ಹೆಸರು ಇಂಪ್ರೆಷನ್ ಸೊಲೈ ಲೆವಾಂತ್ ಎಂದಿದ್ದುದರಿಂದ ಚಿತ್ರವಿಮರ್ಶಕರು ಆ ಪ್ರದರ್ಶನವನ್ನು ಅತ್ಯಂತ ತಿರಸ್ಕಾರದಿಂದ ನೋಡಿ ಪರಿಹಾಸ್ಯ ಮಾಡಿದರು. ಅನೇಕ ವರ್ಷಗಳ ತನಕ ಈತನ ಚಿತ್ರಶಾಲೆಯ ಬಗ್ಗೆ ಜನರಿಗೆ ಅಗೌರವವಿತ್ತು. ಅತ್ಯಂತ ಕಡುಬಡತನದಿಂದ ಜೀವನ ಸಾಗಿಸಬೇಕಾಯಿತು. 1883ರಲ್ಲಿ ನಡೆಸಿದ ಚಿತ್ರಪ್ರದರ್ಶನ ಈತನಿಗೆ ಯಶಸ್ಸು ತಂದುಕೊಟ್ಟಿದ್ದರಿಂದ ಪೆರ್ನಾನ್ ಬಳಿಯ ಗಿವೆರ್ನಿ ಎಂಬಲ್ಲಿ ಸ್ವಲ್ಪ ಅಸ್ತಿ ಮಾಡಿದ. ಜೀವಿತದ ಕೊನೆಯ ತನಕ ಅಲ್ಲಿಯೇ ವಾಸಿಸಿ ಚಿತ್ರರಚನೆಗೆ ತೊಡಗಿದ. ಸ್ವಲ್ಪ ಜನಪ್ರಿಯತೆಯನ್ನೂ ಗಳಿಸಿದ. ಆದರೆ ಈತ ತನ್ನ ಜೀವಿತದ ಕೊನೆಯ ಹತ್ತು ವರ್ಷ ಬಹುತೇಕ ಅಂಧನಾಗಿದ್ದ. ಹುಲ್ಲುಬಣವೆಗಳು, ರೋವೆನ್ ಕತೀಡ್ರಲ್, ಥೇಮ್ಸ್‍ನದಿ, ಲಿಲಿ ಹೂಗಳು ಇವೇ ಮೊದಲಾದವುಗಳನ್ನು ಈತ ದಿನದ ಬೇರೆ ಬೇರೆ ಸಮಯಗಳಲ್ಲ್ಲಿ ಚಿತ್ರಿಸುತ್ತಿದ್ದ. ಬಣ್ಣದ ಮಿಶ್ರಣದ ವಿಷಯ ಬಂದಾಗ ಈತ ಕಪ್ಪು ಮತ್ತು ಕಂದುಬಣ್ಣಗಳನ್ನು ಸಂಪೂರ್ಣವಾಗಿ ಕೈಬಿಟ್ಟು, ಬಣ್ಣದಲ್ಲಿ ವೈದೃಶ್ಯ ಮತ್ತು ಅಖಂಡತೆಯಿಲ್ಲದಂತೆ ಬೆಳಕಿನ ಪರಿಣಾಮವನ್ನುಂಟುಮಾಡುವುದರಲ್ಲಿ ಇತರ ಎಲ್ಲರನ್ನೂ ಮೀರಿಸಿದ. ಷಿಕಾಗೊ ಕಲಾಸಂಸ್ಥೆ, ಮೆಟ್ರೊಪಾಲಿಟನ್ ವಸ್ತು ಸಂಗ್ರಹಾಲಯ, ರಾಷ್ಟ್ರೀಯ ಕಲಾಶಾಲೆ - ಲಂಡನ್, ಲೂವ್ರೆ ಹಾಗೂ ಇನ್ನೂ ಅನೇಕ ಪ್ರಮುಖ ಖಾಸಗಿ ಚಿತ್ತಸಂಗ್ರಹಾಲಯಗಳಲ್ಲಿ ಈತನ ಚಿತ್ರಗಳಿಗೆ ಪ್ರಮುಖ ಪ್ರಾತಿನಿಧ್ಯ ದೊರೆತಿದೆ.						
 (ಎಚ್. ಎಸ್. ಎಚ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ